ಮೋದಿ ಯ ಸೆಲ್ಫಿಯಾಟ..

image

Controversy ಗಳೇ ನರೇಂದ್ರಭಾಯ್ ಮೋದಿ ಸರಕಾರದ ಜೀವಾಳವೆಂಬಂತಾಗಿದೆ. ಜನಹಿತ ಕಾರ್ಯ ಒಂದರ ಹೊರತು ಮಿಕ್ಕೆಲ್ಲದರಲ್ಲೂ ನ.ಮೋ ಸರಕಾರ ನಂ.1.  ಭಾ.ಜ.ಪಾ ದ ಇಂತಹಾ ಕಾರ್ಯವೈಖರಿಗೆ ಸ್ವತಃ ಭಕ್ತರೇ ರೋಸಿಹೋಗಿ ಮಾಸಗಳೇ ಕಳೆದಿವೆ. 
   ಗುಜರಾತ್ ಮುಖ್ಯಮಂತ್ರಿ ಕುರ್ಚಿಯಿಂದ ಪ್ರಧಾನಿ ಕುರ್ಚಿಗೆ ಭಡ್ತಿಹೊಂದಿದ ಮೋದೀಜೀ, ಆಶ್ವಾಸನೆ ಭರವಸೆ, ಕನಸುಗಳ ಎತ್ತರೆತ್ತರದ ಗೋಪುರ ತೋರಿಸಿ, ಈಗ ತಾನೂ ಮಾಜೀ ಪ್ರದಾನಿಯಂತೆ ಮೌನರೋಗಕ್ಕೆ ಬಲಿಯಾದುದರ ಮರ್ಮ ಜನತೆಗೆ ತಿಳಿಯದ್ದೇನಲ್ಲ!!

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರ ದಾರುಣ ಹತ್ಯೆ ನಡೆದುದ್ದನ್ನೂ ಮೋದಿ ಮೌನವಾಗಿಯೇ ವೀಕ್ಷಿಸಿದ್ದರು, ಅದನ್ನು ನಿರ್ಲಜ್ಜವಾಗಿಯೇ “ಅಭಿವೃದ್ಧಿ” ಎಂದರು. ಇಶ್ರತ್ ಎನ್ಕೌಂಟರ್, ಕೌಸರ್ ಬಾನೂ, ಬಿಲ್ಕಿಸ್ ಬಾನೂ ಪ್ರಕರಣಗಳ ಕುರಿತು ಮೋದೀಜೀ ಆಗಲೂ ಮೌನ, ಈಗಲೂ ಮೌನ. ಗುಜರಾತ್ ಹತ್ಯಾಕಾಂಡ ಮೋದೀಜೀ ಆಗಲೂ ಮೌನ ಈಗಲೂ ಮೌನ. ದೇಶದ ಜವಾಬ್ದಾರಿ ಹುದ್ದೆ ಅಲಂಕರಿಸಿದವರ ಹಗರಣ, ವಿವಾದಗಳಿಗೆ ಮೋದೀಜಿ ಮೌನ. ಲಲಿತ್ ಮೋದಿ ಪ್ರಕರಣ ಮೋದೀಜೀ ಮೌನ. ಅಮಿತ್ ಶಾ ಕ್ಲೀನ್ ಚಿಟ್ ಪ್ರಕರಣ, ಘರ್ ವಾಪಸಿ, ರೈತರ ಆತ್ಮಹತ್ಯೆಗಳಿಗೆ,
ಮೋದೀಜೀ ಮೌನ ಮೌನ ಮೌನ…!!

    ಇದೀಗ ಹರ್ಯಾಣಾದಲ್ಲಿ  “ಸೆಲ್ಫೀ ವಿದ್ ಡಾಟರ್” ಎಂಬ ಹೊಟ್ಟೆತುಂಬಿದವರ  ನಾಟಕಕ್ಕೆ ಚಾಲನೆ ನೀಡಲಾಗಿದೆ. ಇದೆಂತಹಾ ದುರವಸ್ಥೆ!!
ಪ್ರಸ್ತುತ ಭಾರತದಲ್ಲಿ ಹೆಣ್ಣಿಗೆ ಬೇಕಾಗಿರುವುದು ತಾಯಿಯ ಗರ್ಭದಿಂದ ಭೂಮಿಗೆ ಜೀವಂತವಾಗಿ ಕಾಲಿಡುವ ಹಕ್ಕು, ಘನತೆಯೊಂದಿಗೆ ಬದುಕುವ ಹಕ್ಕು, ಅತ್ಯಾಚಾರ ಅನಾಚಾರಗಳಿಗೆ ಬಲಿಯಾಗದೇ ಸುರಕ್ಷಿತವಾಗಿರುವ ಹಕ್ಕು, ಶಿಕ್ಷಣದ ಹಕ್ಕು, ಸ್ವಾತಂತ್ರ್ಯದ ಹಕ್ಕು, ಮೊದಲು ಇವುಗಳ ನೀಡಿಕೆಯಾಗಲಿ ಆಮೇಲೆ ಧಾರಾಳವಾಗಿ ಸೆಲ್ಫೀ ತೆಗೆಯೋಣವಂತೆ.

ಹಾ… ಹಾಗೆ ಮೋದೀಜೀ ಸೆಲ್ಫೀ ತೆಗೆದು ಬೇಟಿ ಬಚಾವ್ ಮಾಡುತ್ತಾರಾದರೆ, ಭಾರತದ ಬೇಟಿಗಳೊಂದಿಗೆ ಸಲ್ಫೀ ತೆಗೆಯುವಾಗ ಬ್ಯಾಕ್ ಗ್ರೌಂಡಲ್ಲಿ ಇಶ್ರತ್ ಜಹಾಂ, ಕೌಸರ್ ಬಾನೂ,  ಸೊಹ್ರಾಬುದ್ದೀನ್, ರ ಪಟವೂ ಇರಲಿ, ಗುಜರಾತ್ ಗಲಭೆಯಲ್ಲಿ ಹತರಾದ, ಸುಟ್ಟು ಕರಕಲಾದ, ಮಾನ ಕಳೆದುಕೊಂಡ, ಪ್ರಾಣ ಕಳೆದುಕೊಂಡ, ಗುಜರಾತಿ ಬೇಟಿಗಳ ಪಟವೂ ಇರಲಿ…

ಮೋದೀಜೀ ಯ ಮುಖಕ್ಕೊಂದಿಷ್ಟು extra ಕ(ಲೆ)ಳೆ ಬಂದೀತು..
 
#tohellwithselfies

*** ಗುಲ್ ಮೊಹರ್ ***

Advertisements

ಹಿತವಾದ ನೋವು…

image

…… ಹೀಗೇ ನೆನಪಿನ ಲೋಕದ ಕದತೆರೆದು ಅಲ್ಲಿ ತಲುಪುತ್ತೇನೆ. ಹದಿನಾರರ ನನ್ನಬಳಿ..
ಒಂಟಿಯಾಗಿ ಕಲ್ಲುಬೆಂಚಿಗೊರಗಿ ಅದೇನೋ ಯೋಚನೆಯಲ್ಲಿದ್ದೇನೆ..
ಅನ್ಯರೊಂದಿಗೆ ಹರವಿಕೊಳ್ಳಲಾಗದ ಒಡಲಾಳದ ತಹತಹಿಕೆಗಳನ್ನು ಏಕಾಂತದಲ್ಲಿ ಆಗಸ ನೋಡುತ್ತಾ ನನ್ನಲ್ಲೇ ಹಂಚಿಕೊಳ್ಳುವ ಪರಿಪಾಠವಿದೆ, ಮಾತಿನಬ್ಬರದ ನಡುವೆ ಮೌನಕ್ಕಾಗಿ  ಹಂಬಲಿಸಿ ತಲೆಹಿಡುಕಿ, ಅನಿಸಿಕೊಂಡಿದ್ದಿದೆ…
ಈ ಮೌನಮುಸ್ಸಂಜೆಯಲ್ಲಿ ಆ ದಿನ ಸಿಕ್ಕ ‘ಅವನ’ ನೆನಪು ಕಾಡುತ್ತಿದೆ..
ಆ ಪ್ರಥಮ  ಮೌನ ನೋಟದಲ್ಲೇ ಏನೇನೋ ಹೇಳಿದ್ದ..
ಎದೆಯೊಳಗಿನ ಭಾವನೆಗಳ ಹೊಯ್ದಾಟಕ್ಕೆ ಬಿರುಸಾದ ಎದೆಬಡಿತ ತಹಬಂದಿಗೆ ತರಲಾರದೇ ಕಸಿವಿಸಿಯಾಗಿತ್ತು. ಅನಿಯಂತ್ರಿತವಾಗಿ ಬಿರಿಯುತ್ತಿದ್ದ ತುಟಿ ಕಚ್ಚಿಹಿಡಿದು ನೋವನುಭವಿಸಿದ್ದು, ಗೆಳತಿಯರು ಈ ಕಣ್ಕಳ್ಳತನ ಗಮನಿಸಿಯಾರೆಂದು ದೃಷ್ಟಿ ತಗ್ಗಿಸಿದ್ದು… ಉಫ್.. ಆದಿನ ಅವನ ಕಣ್ತಪ್ಪಿಸಲು ಅದೆಷ್ಟು ಕಷ್ಟಪಟ್ಟಿದ್ದೆ..!

image

ನೇರವಾಗಿ ದಿಟ್ಟಿಸುವ ಧೈರ್ಯವಿಲ್ಲದೇ ಕಣ್ಣಕೊನೆಯಲ್ಲೇ ಗಮನಿಸಿದ್ದೆ, ಹೌದು ಅವನಿತ್ತಲೇ ನೋಡುತ್ತಿದ್ದಾನೆ. ತಿರುಗಿ ನೀಡಲಾ…? ಊಹೂಂ.. ಅಷ್ಟೆದೆಯಿಲ್ಲ ನನ್ನಲ್ಲಿ.. ಅವನ ನೋಟದ ತೀಕ್ಷ್ಣತೆಗೆ ಮೂರ್ಛೆಹೋದೇನು, ಹೃದಯದಾಳದ ನವಿರಾದ ಭಾವತಂತುಗಳ ಮೀಟುವಿಕೆಗೆ ಕೆನ್ನೆ ರಂಗೇರಬಹುದು, ಅದುಮಿಟ್ಟ  ಭಾವಗಳು ವ್ಯಕ್ತವಾಗಿ ಮರೆಮಾಡಲು ಹರಸಾಹಸ ಪಡಬೇಕಾದೀತು….
ಆತನಕವೂ  ಈ ಪ್ರೇಮ ಪ್ರೀತಿ ಕರ್ಮಕಾಂಡಗಳಲ್ಲಿ ಸತ್ವ ಕಂಡವಳೇ ಅಲ್ಲ, ಆದರೂ… ಅದ್ಯಾಕೋ ಆ ಆಳ ನೋಟಗಳಲ್ಲಿ ಎದೆಮೀಟುವ ಉತ್ಕಟ ಒಲವಿನ ಸೆಳವಿತ್ತು.. ತರಗತಿಯೊಳಗೆ ಹೆಜ್ಜೆಯಿಟ್ಟಾಗ ಆ ಮುಖ, ಆ ಧ್ವನಿ ಕಂಡಾಗ ಮನದೊಳಗೇ ತೃಪ್ತಿ..
ಆದರೂ… ಸಮಾಜದ ನೂರಾರು ಕಟ್ಟಳೆಗಳ ಅರಿವಿದ್ದ ಮನಸ್ಸಿಗೆ ಈ ಎಳೆ ಚಿಗುರನ್ನು ಹೆಮ್ಮರವಾಗುವ ಮೊದಲೇ ಚಿವುಟ ಬೇಕೆಂಬ ಅರಿವಿತ್ತು, ಎದೆಯೊಡೆವ ಮುನ್ನವೇ ಕದಮುಚ್ಚಬೇಕಿತ್ತು..

image

ಮನಸಿನದೊಂದೇ ಬಿನ್ನಹ..
ಬೇಡ.. ಈ ಸಲಿಗೆ ಬೇಡ,  ಈ ಪ್ರೀತಿ ಪ್ರೇಮಗಳ ಹುಚ್ಚಾಟಕ್ಕೆ ನನ್ನೊಂದಿಗೆ ಇನ್ನಿತರ ಉಸಿರುಗಳ ಬಲಿಕೊಡಲಾರೆ, ಅದ್ಯಾಕೋ ನಿರ್ಭಾವುಕಳಾಗಿ ಎದೆಯೊಳಗೆ ಹಾರಿದ ಪತಂಗದ ರೆಕ್ಕೆ ಕತ್ತರಿಸಿದ್ದೆ, ಒಡಲಾಳದಲಿ ಹುಟ್ಟಿದ ಭಾವಗಳನ್ನೆಲ್ಲಾ ಹಾಗೇ ಉಸಿರುಗಟ್ಟಿಸಿ ಹತವಾಗಿಸಿ ನಿರ್ಲಿಪ್ತತೆಯ ಮುಖಹೊತ್ತು ಮುಂದಡಿಯಿಟ್ಟ ‘ಆ ದಿನ’ ದ ನೆನಪು ಆಗೀಗ ನೋವುಕೊಡುವುದಿದೆ..
ಹಿತವಾದ ನೋವು…

ನೆನಪುಗಳು ಒಂತರಹಾ ಮೌನಗೆಳೆಯರು…

*** ಗುಲ್ ಮೊಹರ್ ***

ಚೂರು ಹನಿಗಳು

image

ಉಸಿರಲಿ ಉಸಿರಾಗಿ
ಬೆರೆತ ಬಳಿಕ
ನೀ ತೊರೆದ ಸ್ಥಿತಿ ಗೆ
ಮರಣವೆನ್ನಲೇ?

ಮುಸ್ಸಂಜೆಯ
ಕೊನೆಯ ಘಳಿಗೆಯ
ಎರಡು ಶಬ್ಧ ಗಳಿಗೆ
ಮಾತು ಎನ್ನಲೇ?

ಬಯಸಿ ಬಯಸಿ
ನೀ ದಕ್ಕದಾಗ
ಕಣ್ಣಂಚಲಿ ಒತ್ತರಿಸಿ ಬಂದ
ಹೃದ್ಯ ಭಾವನೆಗೆ
ಕಂಬನಿಯೆನ್ನಲೇ..?

*** ಗುಲ್ ಮೊಹರ್ ***

ಒಲವಿನೋಜಸ್ಸು…

image

ಮಣ ಭಾರದ ದುಗುಡಗಳಿಗೆ ಎದಯೊಡ್ಡಿ ಜಯಿಸಿ ಜಗದೆದುರಲಿ ನಾನೊಬ್ಬ ಎದೆಗಾತಿಯಾಗಿ ಸೈ ಎನಿಸಿಕೊಂಡಿದ್ದೆ..
ಆದರೆ, ವಿರಹದೇಟಿಗೆ ನಲುಗಿ, ನಡುಗಿ ತತ್ತರಿಸಿದ ಹೃದಯದ ಪಾಡನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕೆನಿಸಿದಾಗ ನೀನಿಲ್ಲದ ವೇದನೆ
ಏಕಾಂತದಲಿ ಉಮ್ಮಳಿಸಿ ಭಾರವಾದ ಹೃದಯವನ್ನು ಹೊರಲಾರದೇ ಈ ಮನ ತತ್ತರಿಸಿದೆ..
ಕಣ್ಣಕೊನೆಯ ಬಿಂದುಗಳ ಭಾರಕ್ಕೆ ಕಣ್ರೆಪ್ಪೆಗಳೂ ಬಾಗಿವೆ. ನಿನ್ನೆದೆಯೊಳಗೆ ಮೊಗವಿಟ್ಟು ಅತ್ತು ಹಗುರಾಗಬೇಕೆನಿಸಿ, ನಿನಗಾಗಿ ತಡಕಾಡಿ ಸೋತಿದ್ದಿದೆ..

image

ಒಂಟಿಹೋರಾಟದ ಹಾದಿಯಲ್ಲೀಗ ಆಸರೆ ಬೇಕೆನಿಸಿದೆ, ದಣಿದ ಮನಕ್ಕೊಂದಿಷ್ಟು ಸಂತೈಸುವ ಭುಜ ನೀನಾಗಲಾರೆಯೆಂದೆನಿಸಿದ ಮರುಕ್ಷಣ ಎದೆಯೊಡೆಯುವಂತೆ ರೋದಿಸಿದ್ದು ಈಗ ಬರೀ ಕಹಿನೆನಪು.. ಅಸಹನೀಯ ನೋವಿನೊಂದಿಗೇ ನಗುವ ಯತ್ನದಲಿ ಮತ್ತೆ ಮತ್ತೆ ಸೋಲುತ್ತೇನೆ..

image

ಅದ್ಯಾವ ನೆಪಕ್ಕೆ ಬದುಕಿನುತ್ಸಾಹ ಬತ್ತಿಹೋಯಿತು?  ಹೊಳಪಿನೋಕುಳಿ ಕಂಗಳೀಗ ನಿಸ್ತೇಜವಾದುದರ ಕಾರಣ? ಬಲಿಷ್ಟ ಮನಃಶಕ್ತಿ ಸತ್ವಕಳೆದು ನಿಸ್ಸಾರವಾದದ್ದು ಹೇಗೆ ಮತ್ತು ಯಾಕಾಗಿ? ಆತ್ಮದಾಳದಿಂದ ಆಳಕ್ಕಿಳಿದ ಒಲವಿನೋಜಸ್ಸು ಕಳೆಗುಂದುತ್ತದೆಯೇ? ಹಾಗೆ ಕಳೆಗುಂದುವಂತಹದ್ದನ್ನು ಒಲವೆನ್ನಬಹುದೇ? ಯಾಕೋ ಪ್ರಶ್ನೆಗಳೇ ಉಳಿದುಹೋಗಿವೆ ಉತ್ತರವಿಲ್ಲದೇ…

image

*** ಗುಲ್ ಮೊಹರ್ ***

ಒಂಟಿಹಾದಿ..

image

ಈ ಇರುಳ ಮಸಣ ಮೌನ,
ಜೀರುಂಡೆಗಳ ವಿರಹಗೀತೆ
ಮರೆಯಾದ ಚಂದಿರನ
ಅರಸುವ ತಾರಾಹಿಂಡು..
ಮಕಾಡೆಮಲಗಿರುವ
ಇಷ್ಟುದ್ದದ ಹಾದಿ..
ಬೇಡವೆಂದರೂ
ಒತ್ತರಿಸುವ ಅಶ್ರುಬಿಂದು,
ಜಗದಗಲ ಹರಡಿದ ಶೂನ್ಯತೆ..
ನನ್ನೊಳಗೀಗ ಉಳಿದಿರುವ
ಪ್ರಶ್ನೆಯೊಂದೇ…
ಈ ಒಂಟಿ ಹಾದಿಯಲಿ ಮತ್ತೆ ನಾ
ನಡೆದೇನೇ? ನಗಬಲ್ಲೆನೇ?
ಬದುಕಬಲ್ಲೆನೇ?

*** ಗುಲ್ ಮೊಹರ್ ***

ಕೊಂಡಿ…

image

ನೀ ಮೊದಲ ಕೊಂಡಿ
ಕಳಚಿದಾಗಲೇ
ನಾ ಉಳಿದೆಲ್ಲವನ್ನೂ
ತುಂಡರಿಸಿದ್ದೆ;
ಮುನ್ನಡೆಯುವ ನೀ
ಮುಗ್ಗರಿಸದಿರಲೆಂದು..

*** ಗುಲ್ ಮೊಹರ್ ***

ನಿರ್ಲಿಪ್ತತೆ…

image

ನನ್ನ ನಿರೀಕ್ಷೆಗೂ ಮೀರಿದ
ನಿನ್ನ ನಿರ್ಲಿಪ್ತತೆ
ನನ್ನೊಳಗಿನದೇನನ್ನೋ
ಕೊಲ್ಲುತ್ತಿದೆ…

*** ಗುಲ್ ಮೊಹರ್ ***